ಕುಂಕುಮ ಕೇಸರಿ

   ಇರಿಡೇಸೀ ಕುಟುಂಬಕ್ಕೆ ಸೇರಿದ ಕ್ರೋಕಸ್ ಸಟೈವಸ್ ಎಂಬ ಶಾಸ್ತ್ರೀಯ ಹೆಸರಿನ ಮೂಲಿಕೆ ಸಸ್ಯಕ್ಕೂ ಅದರಿಂದ ಬೇರ್ಪಡಿಸಿ ಒಣಗಿಸಿದ ಶಲಾಕಾಗ್ರಗಳಿಗೂ ಇರುವ ಸಾಮಾನ್ಯ ಹೆಸರು (ಸ್ಯಾಫ್ರನ್). ಗ್ರೀಸ್ ಮತ್ತು ಏಷ್ಯ ಮೈನರ್ ಕುಂಕುಮ ಕೇಸರಿಯ ಮೂಲನೆಲೆಗಳು. ಭಾರತದಲ್ಲಿ ಇದನ್ನು ಕಾಶ್ಮೀರದ ಪಾಂಪೂರ್ ಮತ್ತು ಜಮ್ಮುವಿನ ಕಿಶ್ತವಾರ್ ಎಂಬಲ್ಲಿ ಮಾತ್ರ ಹೆಚ್ಚು ವಿಸ್ತಾರವಾಗಿ ಬೆಳೆಸಲಾಗುತ್ತಿದೆ. ಚೀನ, ಪಾಕಿಸ್ತಾನ, ಸ್ಪೇನ್, ಫ್ರಾನ್ಸ್‍ಗಳಲ್ಲೂ ಇದನ್ನು ಕಾಣಬಹುದು. ಕುಂಕಮಕೇಸರಿ ಗಿಡ 6"-10" ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮೂಲಿಕೆ ಸಸ್ಯ. ಇದರಲ್ಲಿ ನೆಲದೊಳಗೆ ಹುದುಗಿರುವ ಈರುಳ್ಳಿಯಂಥ ಗೆಡ್ಡೆಯೂ ಉದ್ದವಾದ ಹುಲ್ಲಿನ ಎಸಳಿನಂಥ ಎಲೆಗಳೂ ಇವೆ. ಹೂಗಳ ಬಣ್ಣ ನೀಲಿ. ಅವಕ್ಕೆ ನವಿರಾದ ವಾಸನೆಯಿದೆ. ಒಂದೊಂದು ಹೂವಿನಲ್ಲೂ ಎಸಳಿನಂಥ ಶಲಾಕೆಯೂ ಮೂರು ಭಾಗಗಳಾಗಿ ವಿಂಗಡಿಸಿದ ಶಲಾಕಾಗ್ರಗಳೂ ಇವೆ. ಹೂವಿನಿಂದ ಬೇರ್ಪಡಿಸಿ ಒಣಗಿಸಿದ ಶಲಾಕಾಗ್ರಗಳೇ ಕುಂಕುಮಕೇಸರಿ. ಶಲಾಕಾಗ್ರಗಳಿಂದಲೇ ದೊರೆತ ಕೇಸರಿ ಉತ್ತಮ ಮಟ್ಟದ್ದು. ಇದಕ್ಕೆ ಕೇಕ್ ಸ್ಯಾಫ್ರನ್ ಎಂದು ಹೆಸರು. ಶಲಾಕಾಗ್ರದ ಕೆಳಗಿನ ಭಾಗದಿಂದ ತೆಗೆದ ಕೇಸರಿ ಸಾಧಾರಣ ಮಟ್ಟದ್ದು. ಇದಕ್ಕೆ ಹೇ ಸ್ಯಾಫ್ರನ್ ಎಂದು ಹೆಸರು.

 ಕೇಸರಿ ಬಹಳ ಬೆಲೆ ಬಾಳತಕ್ಕ ವಸ್ತುಗಳಲ್ಲೊಂದು ಭಾರತದಲ್ಲಿ ಈಗ ಉತ್ವನ್ನವಾಗುತ್ತಿರುವ ಕೇಸರಿ ಇಲ್ಲೇ ಬಳಕೆಯಾಗುತ್ತಿದೆ. ಅಲ್ಲದೆ ಸ್ಪೇನ್ ಮತ್ತು ಫ್ರಾನ್ಸಿನಿಂದ ಹೆಚ್ಚಿನ ಪ್ರಮಾಣದಲ್ಲಿ ಕೇಸರಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಒಂದು ಪೌಂಡಿನಷ್ಟು ಕೇಸರಿಯನ್ನು ಪಡೆಯಲು ಕೊನೆಯ ಪಕ್ಷ 75,000 ಹೂಗಳನ್ನಾದರೂ ಶೇಖರಿಸಬೇಕಾಗುತ್ತದೆ. ಕಾಶ್ಮೀರದಲ್ಲಿ ಒಂದೊಂದು ಹೆಕ್ಟೇರಿಗೆ 140 ಪೌಂಡುಗಳಷ್ಟು ಹೂವನ್ನು ಪಡೆಯಲಾಗುತ್ತಿದೆ. ಇದರಿಂದ 5 ಪೌಂಡುಗಳಷ್ಟು ಕೇಸರಿ ದೊರೆಯುತ್ತದೆ. ಭಾರತದಲ್ಲೇ ಹೆಚ್ಚಿನ ಇಳುವರಿ ಪ್ರಮಾಣವಿದು. 

 ಕೇಸರಿಯಲ್ಲಿ ಕ್ರೋಸಿನ್ ಎಂಬ ಪ್ರಮುಖ ವರ್ಣಪದಾರ್ಥವಿದೆ. ಈ ಬಣ್ಣ ಸುಲಭವಾಗಿ ನೀರಿನಲ್ಲಿ ಕರಗುವುದರಿಂದ ಇದನ್ನು ಬಟ್ಟೆಗಳಿಗೆ ಬಣ್ಣ ಕೊಡಲು ಬಳಸಲಾಗದು. ಕೇಸರಿಯನ್ನು ಬೆಣ್ಣೆ, ಪಾನೀಯಗಳು, ಅನೇಕ ಬಗೆಯ ಸಿಹಿತಿಂಡಿಗಳಿಗೆ ಬಣ್ಣಕೊಡಲೂ, ವಿಶೇಷರುಚಿಯನ್ನು ಕೊಡಲೂ ಬಳಸುತ್ತಾರೆ. ಇದಕ್ಕೆ ಹಲವಾರು ಔಷಧೀಯಗುಣಗಳೂ ಇವೆ. ಇದನ್ನು ಉತ್ತೇಜಕ, ಸೆಳವುರೋಗ ನಿರೋಧಕ, ಕಾಮೋದ್ದೀಪಕ, ಜಠರೋತ್ತೇಜಕವಾಗಿ ಬಳಸುವುದುಂಟು. ಗೆಡ್ಡೆಗಳಿಂದ ಕುಂಕುಮ ಕೇಸರಿಯ ಸಂತತಿಯನ್ನು ಹೆಚ್ಚಿಸಬಹುದು. ಗಿಡ 10 ರಿಂದ 15 ವರ್ಷಗಳ ಕಾಲದವರೆಗೂ ಬದುಕಿರುತ್ತದೆ. ವರ್ಷ ವರ್ಷಕ್ಕೂ ಹೊಸ ಹೊಸ ಗೆಡ್ಡೆಗಳು ರೂಪಿತವಾದಂತೆಲ್ಲ ಹಳೆಯವು ಕೊಳೆತು ಹೋಗುತ್ತಿರುತ್ತವೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವಣ ಕಾಲದಲ್ಲಿ ಕುಂಕುಮಕೇಸರಿ ಹೂಬಿಡುತ್ತದೆ. ಪ್ರತಿ ಮುಂಜಾನೆ ಇಬ್ಬನಿ ಕಾಣೆಯಾದ ತರುವಾಯ ಇದರ ಶಲಾಕಾಗ್ರಗಳನ್ನು ಬಿಡಿಸುವುದು ವಾಡಿಕೆ. ಈ ಕಾಲದಲ್ಲಿ ಮಳೆ ಹಿಡಿದರೆ ಇಳುವರಿ ಕಡಿಮೆಯಾಗುತ್ತದೆ.

(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ